top of page
Search
Writer's pictureAyurYoga Being Natural

ಆಯುರ್ವೇದದಿಂದ ಆರೋಗ್ಯ ರಕ್ಷಣೆ

Updated: Jun 1, 2023

ಆಯುರ್ವೇದದ ಮೂಲ ಉದ್ದೇಶ ಆರೋಗ್ಯವಂತ ವ್ಯಕ್ತಿಯ ಸ್ವಾಸ್ಥ್ಯ ರಕ್ಷಣೆ ಮತ್ತು ರೋಗಿಯ ವ್ಯಾಧಿ ನಿವಾರಣೆ. ಆರೋಗ್ಯ ಸಂರಕ್ಷಣೆ ಮತ್ತು ವ್ಯಾಧಿ ನಿವಾರಣೆಗಾಗಿ ಮಾನವ ಆಚರಿಸಬೇಕಾದ ಆಹಾರ- ವಿಹಾರ- ಔಷಧ ಉಪಚಾರಗಳು ಅದೆಷ್ಟೋ ಇವೆ. ಇಂದಿನ ದಿನಗಳಲ್ಲಿ ರೋಗನಿರೋಧಕಶಕ್ತಿ ವರ್ಧಕಗಳು/ Immunity boosters ಎನ್ನುವವಿಷಯ ವು ಈ ಮೇಲಿನ ವಿಚಾರ ಧಾರೆಗಳಡಿಯಲ್ಲಿಯೇ ಬರುವುದೆಂದರೆ ತಪ್ಪಾಗಲಾರದು. ಈಗ ರೋಗನಿರೋಧಕಶಕ್ತಿ ವರ್ಧಕಗಳಾದ ಆಹಾರ- ವಿಹಾರ ಹಾಗೂ ಔಷಧ ಗಳ ಮಾಹಿತಿ ಅತ್ಯಂತ ಅವಶ್ಯಕವಾಗಿರುವುದಂತೂ ನಿಜ.


ಪ್ರಸ್ತುತ ಆಹಾರದ ಬಗ್ಗೆ ಇರುವ ನಿರ್ಲಕ್ಷ್ಯವೇ ರೋಗ ನಿರೋಧಕ ಶಕ್ತಿಯ ಕುಂದುವಿಕೆ ಮತ್ತು ರೋಗಕ್ಕೆ ಪ್ರಮುಖ ಕಾರಣ. "ಆಹಾರಂ ಮಹಾ ಭೈಷಜ್ಯಂ", ಆಹಾರವೇ ಅತೀ ಮುಖ್ಯವಾದ ಮತ್ತು ಶ್ರೇಷ್ಠವಾದ ಔಷಧಿ ಎಂಬುದು ಆಯುರ್ವೇದದ ಪರಿಕಲ್ಪನೆ. ಆಹಾರವನ್ನು ಔಷಧಿಯಾಗಿಯೂ, ಔಷಧಿ ದ್ರವ್ಯವನ್ನು ಆಹಾರದ ರೂಪದಲ್ಲಿಯೂ ಬಳಕೆ ಮಾಡುವ ವಿಧಾನ, ಆಯುರ್ವೇದ ವೈದ್ಯನಿಗಿರುವ ವಿಶೇಷ ಜ್ಞಾನ. ಸಾಮಾನ್ಯವಾಗಿ ಈ ಕೆಳಗೆ ಹೇಳಿದ ದ್ರವ್ಯ ಗಳನ್ನು ನಮ್ಮ ದಿನನಿತ್ಯದ ಆಹಾರವಾಗಿ ಬಳಸಿದಲ್ಲಿ ಹಲವಾರು ಬಗೆಯ ವ್ಯಾಧಿಗಳನ್ನು ತಡೆಗಟ್ಟಬಹುದು.

ಗೋವಿನ ಹಾಲು, ಗೋವಿನ ತುಪ್ಪ, ಜೇನು ( ಬಿಸಿನೀರು ಅಥವಾ ಬಿಸಿ ಆಹಾರ ದೊಂದಿಗೆ ವರ್ಜ್ಯ), ಹೆಸರು ಬೇಳೆ, ಕೆಂಪಕ್ಕಿ ಅನ್ನ, ಬಾರ್ಲಿ ಗಂಜಿ, ಅರಳು/ ಹೊದಳಿನ ಗಂಜಿ, ಸೈಂಧವ ಲವಣ, ಹೀರೇಕಾಯಿ, ಪಡವಲಕಾಯಿ ಇತ್ಯಾದಿ. ಋತುವಿಗನುಸಾರವಾಗಿ ಲಭ್ಯವಿರುವ ತರಕಾರಿ ಮತ್ತು ಹಣ್ಣಿನ ಸೇವನೆ.

ವಿಹಾರ ಎಂಬುದು ಮುಖ್ಯವಾಗಿ ವ್ಯಕ್ತಿಯ ಮಾನಸಿಕ ಆರೋಗ್ಯದ ಸಂರಕ್ಷಣೆಗಾಗಿ ಹೇಳಲಾಗಿದೆ. ಸತ್ಯವನ್ನು ನುಡಿಯುವುದು, ಕೋಪಗೊಳ್ಳದಿರುವುದು, ಪ್ರಿಯವಾದ ಮಾತುಗಳನ್ನಾಡುವುದು ಮತ್ತು ಕೇಳುವುದು, ಆಧ್ಯಾತ್ಮಿಕ ಚಿಂತನೆ, ಮದ್ಯಪಾನ ವರ್ಜನೆ, ದಾನ ಮಾಡುವುದು, ಒಳ್ಳೆಯ ಚಿಂತನೆ, ಸನ್ನಡತೆ, ರಾತ್ರಿ ಜಾಗರಣೆ ಮಾಡದೆ ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸ ರೂಢಿಸಿಕೊಳ್ಳುವುದು. ಶಾರೀರಿಕವಾಗಿ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುವುದರ ಜೊತೆಗೆ ಯೋಗಾಸನ ಮತ್ತು ಪ್ರಾಣಾಯಾಮದ ಅಭ್ಯಾಸ. ಈ ರೀತಿಯ ಆಚರಣೆಗಳು ಮನಸ್ಸನ್ನು ದಿನಪೂರ್ತಿ ಉಲ್ಲಾಸ, ಉತ್ಸಾಹದಿಂದಿರುವಂತೆ ಪ್ರೇರೇಪಿಸುವುದರೊಂದಿಗೆ ಶಾರೀರಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುವುದು.


ಆಯುರ್ವೇದ ಔಷಧಿ ಎಂದಾಕ್ಷಣ, ಕೇವಲ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ಅಥವಾ ಕಷಾಯ ಇವಿಷ್ಟೇ ಎಂಬ ಭಾವನೆ ಹಲವರದು. ಸ್ವರಸ, ಚೂರ್ಣ, ಕಷಾಯ, ಮಾತ್ರೆ, ಆಸವ- ಅರಿಷ್ಟ, ಕ್ಷೀರಪಾಕ ಹೀಗೆ ಹಲವಾರು ರೀತಿಯಲ್ಲಿ ಔಷಧಿ ದ್ರವ್ಯಗಳ ಪ್ರಯೋಗಗಳಿವೆ. ಯಾವ ವ್ಯಕ್ತಿಗೆ, ಯಾವ ರೋಗಕ್ಕೆ, ಎಷ್ಟು ಪ್ರಮಾಣದಲ್ಲಿ, ಎಷ್ಟು ಹೊತ್ತಿಗೆ (ಊಟದ ನಂತರ/ ಊಟದ ಮೊದಲು/ ಊಟದೊಂದಿಗೆ/ ಬೆಳಗ್ಗೆ/ ರಾತ್ರಿ ) ಔಷಧ ನೀಡಬೇಕು ಎಂಬಿತ್ಯಾದಿ ವಿಚಾರಗಳಿವೆ. ಈ ರೀತಿಯ ಔಷಧ ಪ್ರಯೋಗ ಕೇವಲ ಆಯುರ್ವೇದ ಸಿದ್ಧಾಂತವನ್ನರಿತ ವೈದ್ಯನಿಗೆ ಮಾತ್ರವೇ ನೀಡಲು ಸಾಧ್ಯ.


ಆಯುರ್ವೇದದಲ್ಲಿ ಉಲ್ಲೇಖಿಸಿರುವ ಔಷಧಿಗಳೆಲ್ಲವೂ ರೋಗ ನಿವಾರಣೆ ಮಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಎಂಬ ವಿಷಯವಂತೂ ಅಕ್ಷರಶಃ ಸತ್ಯ. ಆಯುರ್ವೇದ ಚಿಕಿತ್ಸೆಯಲ್ಲಿ ಗುಣಮುಖವಾದ ರೋಗದ ಪುನರಾವರ್ತನೆ ಬಹಳ ವಿರಳ. ಏಕೆಂದರೆ ವ್ಯಾಧಿಯ ಸಂಪೂರ್ಣನಾಶದ ಜೊತೆ ಜೊತೆಗೆ ಆ ರೋಗವು ಪುನಃ ಕಾಣಿಸಿಕೊಳ್ಳದಂತೆ ಶರೀರದಲ್ಲಿ ನಿರ್ದಿಷ್ಟ ರೋಗನಿರೋಧಕಶಕ್ತಿಯ ವರ್ಧನೆಯಾಗುವುದು.

√ ಅಮೃತಬಳ್ಳಿ ಕಷಾಯ

√ ಅಮೃತಬಳ್ಳಿ + ಶುಂಠಿ ಕಷಾಯ

√ ಅಮೃತಬಳ್ಳಿ + ಶುಂಠಿ+ ಕರಿಮೆಣಸು ಕಷಾಯ

√ ಅಮೃತಬಳ್ಳಿ + ಶುಂಠಿ+ ಕರಿಮೆಣಸು+ ಲವಂಗ ಕಷಾಯ

√ ಅಮೃತಬಳ್ಳಿ+ ನೆಲ್ಲಿಕಾಯಿ ಕಷಾಯ

√ ಆಡುಸೋಗೆ ರಸ


√ ತುಲಸಿ ಎಲೆಯ ರಸ+ ಕರಿಮೆಣಸು

√ ತುಲಸಿ ಎಲೆ+ ಕರಿಮೆಣಸು ಕಷಾಯ

√ ತುಂಬೆಗಿಡದ ರಸ+ ಕರಿಮೆಣಸು

√ ತುಂಬೆಗಿಡ+ ಕರಿಮೆಣಸು ಕಷಾಯ

√ ಹಸಿಶುಂಠಿರಸ+ ಜೇನು

ಹೀಗೆ ಲೆಕ್ಕವಿಲ್ಲದಷ್ಟು ದ್ರವ್ಯಗಳನ್ನು ಏಕಮೂಲಿಕೆಯಾಗಿ ಅಥವಾ ಹಲವಾರು ದ್ರವ್ಯ ಗಳೊಂದಿಗೆ ಪ್ರಯೋಗಿಸಬಹುದಾಗಿದೆ. ಮನೆಮದ್ದೂ ಸಹ ಎಲ್ಲರಿಗೂ ಯೋಗ್ಯ ಹಾಗೆಯೇ ಪರಿಣಾಮಕಾರಿಯಾಗಬೇಕೆಂದೇನಿಲ್ಲ. ಆದುದರಿಂದ ಬಳಸುವುದಕ್ಕೆ ಮುಂಚಿತವಾಗಿ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಉತ್ತಮ.


ಲೇಖನ: ಡಾ. ವಿದ್ಯಾಲಕ್ಷ್ಮಿ ಟಿ

Email: ayudrvlt@gmail.com

16 views0 comments

Recent Posts

See All

Comments

Rated 0 out of 5 stars.
No ratings yet

Add a rating
bottom of page