ಆಯುರ್ವೇದದಲ್ಲಿ ವ್ಯಾಯಾಮ ಎಂಬುದು ದಿನಚರಿಯ ಒಂದು ಭಾಗ. ' ಶರೀರ ಆಯಾಸ ಜನನಂ ಕರ್ಮ', ದೇಹಕ್ಕೆ ಯಾವ ಕ್ರಿಯೆಯು ಆಯಾಸವನ್ನುಂಟು ಮಾಡುತ್ತದೋ ಅದೇ ವ್ಯಾಯಾಮ. ಕೆಲವರಿಗೆ ಸ್ವಲ್ಪ ಮಟ್ಟಿಗೆ ನಡೆಯುವುದು ವ್ಯಾಯಾಮವಾದರೆ ಇನ್ನು ಕೆಲವರಿಗೆ ಅದಕ್ಕಿಂತಲೂ ಅಧಿಕವಾದ ಶ್ರಮಯುಕ್ತ ಕೆಲಸ ವ್ಯಾಯಾಮದ ಫಲವನ್ನು ನೀಡಬಹುದು. ಇದೆಲ್ಲಾ ದೇಹ ಪ್ರಕೃತಿ, ವಯಸ್ಸು ಹಾಗೂ ವ್ಯಕ್ತಿಯ ಬಲವನ್ನವಲಂಬಿಸಿದೆ.
ಶಾರೀರಿಕ ವ್ಯಾಯಾಮವು ದೇಹದ ಸ್ಥಿರತೆ ಹಾಗೂ ಬಲವರ್ಧನೆಗೆ ಸಹಾಯಕ. 'ಅತಿಯಾದರೆ ಅಮೃತವೂ ವಿಷ' ಎಂಬ ಲೋಕೋಕ್ತಿಯಂತೆ ವ್ಯಾಯಾಮವು ವ್ಯಕ್ತಿಯ ಸಾಮರ್ಥ್ಯಕ್ಕಿಂತ ಅಧಿಕವಾದಲ್ಲಿ ಹಲವಾರು ಮಾರಣಾಂತಿಕ ವ್ಯಾಧಿಗಳನ್ನೇ ಉಂಟುಮಾಡಬಹುದು. ಆದುದರಿಂದಲೇ ಚರಕ ಸಂಹಿತೆಯಲ್ಲಿ, "ಮಾತ್ರಯಾ ತಾಂ ಸಮಾಚರೇತ್" ಎಂದು ಉಲ್ಲೇಖಿಸಲಾಗಿದೆ. ಅಂದರೆ ಮನುಷ್ಯನ ಶಕ್ತಿಯನ್ನಾಧರಿಸಿ ಹಿತಮಿತವಾಗಿ ವ್ಯಾಯಾಮ ಮಾಡಿದಲ್ಲಿ ದೇಹವು ಹಗುರವಾಗಿ, ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧವಾಗುವುದಲ್ಲದೇ, ಜಠರಾಗ್ನಿಯನ್ನು ಸುಸ್ಥಿತಿಯಲ್ಲಿಟ್ಟು ಪಚನ ಕ್ರಿಯೆಯೂ ಸುಲಭವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
" ಆಹಾರಂ ಮಹಾ ಭೈಷಜ್ಯಂ" ಆಹಾರವೇ ಅತ್ಯುತ್ತಮ ಮತ್ತು ಶ್ರೇಷ್ಠ ಔಷಧ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ರುಚಿಗೇ ಪ್ರಾಮುಖ್ಯತೆಯನ್ನು ಕೊಟ್ಟು ಹಲವಾರು ವಿಷ ದ್ರವ್ಯಗಳ ಸೇವನೆ ಮಾಡುವ ಮನುಷ್ಯನಿಗೆ ವ್ಯಾಯಾಮವೆಂಬುದು ಒಂದು ವರದಾನವಾಗಿದೆ. ಅರಿವಿದ್ದೊ ಅರಿವಿಲ್ಲದೆಯೋ ಅನಿಯಮಿತ, ಅತಿ ಅಥವಾ ಅಲ್ಪಪ್ರಮಾಣ, ದೋಷಯುಕ್ತ ಅಥವಾ ವಿರುದ್ಧ ಆಹಾರ ಸೇವನೆ ಮಾಡುತ್ತಿರುವ ದೈನಂದಿನ ಜೀವನದಲ್ಲಿ , ನಿತ್ಯ ನಿರಂತರ ನಿಯಮಿತವಾಗಿ ವ್ಯಾಯಾಮ ಮಾಡುವ ವ್ಯಕ್ತಿಯು ಸದೃಢವಾಗಿಯೂ, ನಿರೋಗಿಯಾಗಿಯೂ ಇರಬಹುದು.
ಹಾಗಾದರೆ ವ್ಯಾಯಾಮದ ಪ್ರಮಾಣವೇನು? " ಅರ್ಧ ಶಕ್ತ್ಯಾ ನಿಷೇವ್ಯಃ" ಅಂದರೆ ಮನುಷ್ಯ ತನ್ನ ದೇಹ ಸಾಮರ್ಥ್ಯದ ಅರ್ಧದಷ್ಟೇ ಶಕ್ತಿಯನ್ನು ವ್ಯಾಯಾಮಕ್ಕಾಗಿ ವ್ಯಯಿಸಬೇಕು. ಮುಖ್ಯವಾಗಿ ಹೇಮಂತ, ಶಿಶಿರ ಮತ್ತು ವಸಂತ ಋತುಗಳಲ್ಲಿ ಜೊತೆಗೆ ಯಥೇಚ್ಛವಾಗಿ ಹಾಲು, ಬೆಣ್ಣೆ, ತುಪ್ಪ ಇತ್ಯಾದಿ ಸ್ನಿಗ್ಧ ದ್ರವ್ಯಗಳನ್ನು ಬಳಸುವ ವ್ಯಕ್ತಿ ಈ ರೀತಿಯಾಗಿ ವ್ಯಾಯಾಮ ಮಾಡಬಹುದಾಗಿದೆ. ಇತರ ಋತುಗಳಲ್ಲಿ ಸ್ವಲ್ಪವೇ ಪ್ರಮಾಣದ ವ್ಯಾಯಾಮವೂ ಕೂಡ ದೇಹಕ್ಕೆ ವಿಶಿಷ್ಟವಾದ ಸ್ಥಿರತೆಯನ್ನು ನೀಡುವುದರಲ್ಲಿ ಸಂಶಯವಿಲ್ಲ. " ವ್ಯಾಧಯೋ ನೋಪಸರ್ಪಂತಿ ಸಿಂಹಂ ಕ್ಷುದ್ರಮೃಗಾ ಇವ" ಹೇಗೆ ಕ್ಷುದ್ರ ಮೃಗಗಳು ಸಿಂಹದ ಬಳಿಯಲ್ಲಿ ಸುಳಿಯುವುದಿಲ್ಲವೋ ಅದೇ ರೀತಿ ನಿಯಮಿತ ವ್ಯಾಯಾಮವು ಶರೀರಕ್ಕೆ ಯಾವುದೇ ವ್ಯಾಧಿಯು ಬಾಧಿಸದಂತೆ ತಡೆಯುವುದಂತೂ ಸತ್ಯ.
ಹೀಗಿರುವಾಗ 'ಅರ್ಧಶಕ್ತಿ' ಇದನ್ನು ಅಳೆಯುವ ಮಾಪನವಾದರೂ ಏನು? ಇದು ಬಹಳ ಮುಖ್ಯವಾದ ಅಂಶ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ದೇಹ ಪ್ರಕೃತಿ, ವಯಸ್ಸು, ಆಹಾರ- ವಿಹಾರದ ಕಾರಣಗಳಿಂದಾಗಿ ವ್ಯಾಯಾಮ ಶಕ್ತಿಯನ್ನು ನಿರ್ಧರಿಸುವ ಅಗತ್ಯತೆ ಇದೆ. ಹೀಗಾಗಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇತರರೊಂದಿಗೆ ಹೋಲಿಕೆ ಮಾಡುವದನ್ನು ಬಿಟ್ಟು ತಮ್ಮ ತಮ್ಮ ಶರೀರದ ಮೇಲೆ ಗಮನಹರಿಸಬೇಕಾಗಿದೆ. ವ್ಯಕ್ತಿಯೊಬ್ಬನಿಗೆ ಕಂಕುಳಿನ ಭಾಗ, ಹಣೆ, ಮೂಗಿನ ಮೇಲ್ಭಾಗ, ಅಂಗೈ, ಪಾದ ಹಾಗೂ ಇತರೇ ಸಂಧಿಗಳಲ್ಲಿ ಬೆವರು ಕಂಡುಬಂದು, ಬಾಯಿ ಒಣಗಿದಂತೆಲ್ಲಾ ಭಾಸವಾದರೆ ಆಗ ವ್ಯಾಯಾಮದಿಂದ ವಿರಮಿಸಲು ಸೂಕ್ತ ಸಮಯ ಎಂದು ತಿಳಿಯಬೇಕು. ಇದು ಅರ್ಧಶಕ್ತಿ ವ್ಯಾಯಾಮದ ಲಕ್ಷಣ. ಈ ಸಮಯ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ. ಕೆಲವರಿಗೆ 15 ನಿಮಿಷದಲ್ಲಿ ಈ ಮೇಲಿನ ಲಕ್ಷಣಗಳು ಕಂಡುಬಂದರೆ ಇನ್ನು ಕೆಲವರಿಗೆ 20 ಅಥವಾ 30 ನಿಮಿಷಗಳು ಬೇಕಾಗಬಹುದು. ಗ್ರೀಷ್ಮ, ವರ್ಷ, ಶರದೃತುಗಳಲ್ಲಿ ಮತ್ತು ನಿತ್ಯಾಭ್ಯಾಸ ಮಾಡುವಾಗ ಇದಕ್ಕಿಂತ ಸ್ವಲ್ಪ ಕಡಿಮೆ ವ್ಯಾಯಾಮವೇ ದೇಹಕ್ಕೆ ಶ್ರೇಯಸ್ಕರ. ವ್ಯಾಯಾಮದ ನಂತರ ಇಡೀ ಶರೀರವನ್ನು ಮೃದುವಾಗಿ ಮರ್ದನ ಮಾಡಿದರೆ ಬಹಳ ಉತ್ತಮ.
ಅರ್ಧಶಕ್ತಿಗಿಂತ ಅಧಿಕವಾಗಿ ವ್ಯಾಯಾಮ ಮಾಡಿದಲ್ಲಿ ಹಲವಾರು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶರೀರದಲ್ಲಿ ಅತಿಯಾದ ಸುಸ್ತು, ತಲೆಸುತ್ತು, ಕೆಮ್ಮು, ವಾಂತಿ ಹಾಗೂ ರಕ್ತಪರಿಚಲನೆಯಲ್ಲಿ ಬಹಳಷ್ಟು ಏರುಪೇರಾಗಿ ಹತ್ತು ಹಲವು ರೋಗಗಳಿಗೆ ತುತ್ತಾಗಬಹುದು. ಇದೇ ಉದ್ದೇಶದಿಂದ ಆಯುರ್ವೇದದಲ್ಲಿ ' ಗಜಂ ಸಿಂಹ ಇವಾಕರ್ಷನ್ ಭಜನ್ನತಿ ವಿನಶ್ಯತಿ' ಎಂಬ ಉದಾಹರಣೆಯನ್ನು ನೀಡಲಾಗಿದೆ. ಹೇಗೆ ಆನೆಯು ಸಿಂಹದೊಂದಿಗೆ ಹೋರಾಡಿ ಪರಾಜಯಗೊಂಡು ಸಾವನ್ನಪ್ಪಿದ್ದರೂ, ಅತಿಯಾದ ಶಾರೀರಿಕ ಶ್ರಮದಿಂದಾಗಿ ಸಿಂಹವೂ ಕೊನೆಗೆ ನಾಶವನ್ನೇ ಹೊಂದುವುದೋ ಹಾಗೇ ನಿತ್ಯವೂ ತಮ್ಮ ಶಕ್ತಿ ಮೀರಿ ಮಾಡಿದ ವ್ಯಾಯಾಮ ಸ್ವಲ್ಪಮಟ್ಟಿಗೆ ಶರೀರಕ್ಕೆ ದೃಢತೆಯನ್ನು ತಂದಂತೆ ಗೋಚರಿಸಿದರೂ ಕಾಲಾಂತರದಲ್ಲಿ ವಿನಾಶಕ್ಕೆ ಹಾದಿಯಾಗಬಹುದು.
ಆದುದರಿಂದಲೇ ಪ್ರತಿಯೊಬ್ಬರೂ ದೇಹದ ಬಲ, ವಯಸ್ಸು, ಋತುಕಾಲ, ಆಹಾರ ಸೇವನೆ ಮತ್ತು ತಮ್ಮ ತಮ್ಮ ಉದ್ಯೋಗ ಇತ್ಯಾದಿ ವಿಚಾರಗಳನ್ನು ಗಮನದಲ್ಲಿರಿಸಿ ವ್ಯಾಯಾಮವನ್ನು ನಿತ್ಯವೂ ನಿಯಮಿತವಾಗಿ ರೂಢಿಸಿಕೊಂಡಲ್ಲಿ ಶಾರೀರಿಕವಾಗಿ ಸದೃಢರೂ, ಆರೋಗ್ಯವಂತರಾಗಿಯೂ ಬಾಳಬಹುದು.
ಡಾ. ವಿದ್ಯಾಲಕ್ಷ್ಮೀ ಆಶೀಷ್ ಬಡೆಕ್ಕಿಲ
ಆಯುರ್ವೇದ ವೈದ್ಯೆ
Commentaires